ನರ್ಸರಿ ಶಾಲೆ -
ಈ ಶತಮಾನದ ಆದಿಯಲ್ಲಿ ಪ್ರಾಥಮಿಕ ಪೂರ್ವದ ಮಕ್ಕಳಿಗಾಗಿ ಮೊಟ್ಟಮೊದಲು ಇಂಗ್ಲೆಂಡಿನಲ್ಲಿ ಪ್ರಚಾರಕ್ಕೆ ಬಂದ ಒಂದು ಪ್ರಮುಖ ಶಿಕ್ಷಣಸಂಸ್ಥೆ. ಶೈಶವದಲ್ಲಿ ಮಕ್ಕಳಿಗೆ ಸರಿಯಾದ ರಕ್ಷಣೆ, ಪೋಷಣೆ ಮತ್ತು ಶಿಕ್ಷಣ ಅಗತ್ಯವೆಂಬ ಅಂಶಗಳು ಸ್ಪಷ್ಟಪಟ್ಟಂತೆ ಅವರಿಗಾಗಿ ವಿಶೇಷ ರೀತಿಯ ಸಂಸ್ಥೆಗಳನ್ನು ಸ್ಥಾಪಿಸುವ ಯತ್ನ ಯೂರೋಪಿನಲ್ಲಿ ಕಳೆದ ಶತಮಾನದಲ್ಲಿ ನಡೆಯಿತು. ಮೊದಲು ಫೀಡ್ರಿಖ್ ಫ್ರೋಬಲ್ ಜರ್ಮನಿಯಲ್ಲಿ ಕಿಂಡರ್‍ಗಾರ್ಟನ್ ಎಂಬ ಹೆಸರಿನಿಂದಲೂ ಅನಂತರ ಇಟಲಿಯಲ್ಲಿ ಮರೀಯ ಮಾಂಟೆಸೊರಿ ಎಂಬಾಕೆ ಮಾಂಟೆಸೊರಿ ಶಾಲೆ ಎಂಬ ಹೆಸರಿನಿಂದಲೂ ಶಿಶುಗಳಿಗಾಗಿ ವಿಶಿಷ್ಟ ರೀತಿಯ ಶಾಲೆಗಳನ್ನು ಆರಂಭಿಸಿದರು. ಕಿಂಡರ್‍ಗಾರ್ಟನ್ ಶಾಲೆಗಳು ಜರ್ಮನಿಯಲ್ಲೂ ಇತರ ದೇಶಗಳಲ್ಲೂ ಬಹುಬೇಗ ಪ್ರಚಾರಕ್ಕೆ ಬಂದವು. 1904ರಲ್ಲಿ ಇಂಗ್ಲೆಂಡಿನಲ್ಲೂ ಆರಂಭವಾದವು. ಆದರೆ ಅವು ಅಲ್ಲಿನ ಜನತೆಯ ಅಭಿಮಾನವನ್ನು ಗಳಿಸಲಿಲ್ಲ. ಆದರೂ ಪ್ರಾಥಮಿಕ ಶಾಲೆಗೆ ಬರುವುದಕ್ಕೆ ಮುಂಚಿನ ಮಕ್ಕಳಿಗೆ ವಿಶೇಷ ರೀತಿಯ ಶಾಲೆಗಳು ಅಗತ್ಯವೆಂಬ ಅಂಶವನ್ನು ಅಲ್ಲಿನ ಶಿಕ್ಷಣವೇತ್ತರು ಕಂಡುಕೊಂಡರು. ಇಂಗ್ಲೆಂಡಿನ ಜನಜೀವನಕ್ಕೆ ಒಪ್ಪುವ ಅಂಥ ಶಾಲೆಯನ್ನು ಆರಂಭಿಸಿದ ಕೀರ್ತಿ ಮಾರ್ಗರೇಟ್ ಮ್ಯಾಕ್ಮಿಲನ್ ಎಂಬಾಕೆಗೆ ಸಲ್ಲುತ್ತದೆ.

ಕೊಳಚೆಯಲ್ಲಿ ಆಡುತ್ತಿದ್ದ ಬಡಮಕ್ಕಳ ಬಗ್ಗೆ ಮಾರ್ಗರೆಟ್ ಬಾಲ್ಯದಿಂದಲೂ ಮನ ಮರುಗುತ್ತಿದ್ದಳು. ಅವರಿಂದ ಒದಗಬಹುದಾದ ರೋಗರುಜಿನಾದಿಗಳಿಂದ ಮಕ್ಕಳು ಬಹು ಸಂಖ್ಯೆಯಲ್ಲಿ ಮರಣಹೊಂದುವುದನ್ನೂ ಬದುಕಿದ್ದರೂ ರೋಗ ಪ್ರತಿಭಟಿಸುವ ಶಕ್ತಿಯಿಲ್ಲದೆ ದುರ್ಬಲರಾಗುವುದನ್ನೂ ಅವಳು ಅರಿತುಕೊಂಡಿದ್ದಳು. ಅಸಹಾಯಸ್ಥಿತಿಯ ಅಂಥ ಮಕ್ಕಳಿಗೆ ಚಿಕಿತ್ಸಾಲಯವನ್ನು ಏರ್ಪಡಿಸಬೇಕೆಂಬ ಉದ್ದೇಶದಿಂದ ವೈದ್ಯವೃತ್ತಿಯಲ್ಲಿ ಶಿಕ್ಷಣ ಪಡೆದು ಆರೋಗ್ಯ ಪ್ರಚಾರಕಾರ್ಯವನ್ನು ಆರಂಭಿಸಿದಳು. 1904ರಲ್ಲಿ ಡೆಟ್‍ಫರ್ಡ್ ಎಂಬ ಸ್ಥಳದಲ್ಲಿ ಒಂದು ಚಿಕಿತ್ಸಾಲಯವನ್ನು ತೆರೆದಳು. ಶೈಶವದಲ್ಲಿ ವೈದ್ಯಚಿಕಿತ್ಸೆಯಂತೆ ಆಹಾರ, ಉಡುಪು, ಸ್ನಾನ ಮುಂತಾದ ಪೋಷಣೆಯೂ ಅವರ ಜೀವನಕ್ಕೊಪ್ಪುವ ಚಟುವಟಿಕೆಯ ಶಿಕ್ಷಣವೂ ಅಗತ್ಯವೆಂಬ ಅಂಶವನ್ನು ಮನಗಂಡು 1911ರಲ್ಲಿ 3 ರಿಂದ 7 ವರ್ಷದ ಮಕ್ಕಳಿಗಾಗಿ ನರ್ಸರಿ ಸ್ಕೂಲ್ ಎಂಬ ಹೆಸರಿನಿಂದ ನೂತನ ರೀತಿಯ ಸಂಸ್ಥೆಯನ್ನು ಸ್ಥಾಪಿಸಿದಳು. ಇದೇ ಮೊಟ್ಟಮೊದಲನೆಯ ನರ್ಸರಿ ಶಾಲೆ. ಡೆಟ್‍ಫರ್ಡಿನಲ್ಲಿ ಆರಂಭವಾದ ಈ ಶಾಲೆ ನಾಡಿನ ಶಿಕ್ಷಣತಜ್ಞರ ಗಮನವನ್ನು ಸೆಳೆದು ಅಂಥ ಶಾಲೆಗಳನ್ನು ದೇಶಾದ್ಯಂತ ಸ್ಥಾಪಿಸುವ ಯತ್ನ ನಡೆಯಿತು. ಇಂಗ್ಲೆಂಡಿನ ಇತರ ಊರುಗಳಲ್ಲೂ ಡೆಟ್‍ಫರ್ಡಿನಲ್ಲಿ ಆರಂಭವಾದ ಶಾಲೆಗಳ ಮಾದರಿಯಲ್ಲಿ ನರ್ಸರಿ ಶಾಲೆಗಳು ಆರಂಭವಾದವು. ಬ್ರಿಟಿಷರು ಆಳುತ್ತಿದ್ದ ವಸಾಹತುಗಳಲ್ಲೂ ನರ್ಸರಿ ಶಾಲೆಗಳು ಪ್ರಚಾರಕ್ಕೆ ಬಂದು ಜನಪ್ರಿಯತೆಗಳಿಸಿದವು. ಭಾರತದಲ್ಲಿ ಶಿಶುವಿಹಾರ, ಬಾಲವಾಡಿ, ನರ್ಸರಿಶಾಲೆ ಮುಂತಾದ ಹೆಸರುಗಳಿಂದ ದೇಶದ ವಿವಿಧ ಭಾಗಗಳಲ್ಲಿ ಅಸ್ತಿತ್ವಕ್ಕೆ ಬಂದವು. ಕೆಲವು ಪ್ರದೇಶಗಳಲ್ಲಿ ಕಿಂಡರ್‍ಗಾರ್ಟನ್ ಮತ್ತು ಮಾಂಟೆಸೊರಿ ಶಾಲೆಗಳು ಆರಂಭವಾದರೂ ಅವು ಅಷ್ಟಾಗಿ ಜನಪ್ರಿಯವಾಗಲಿಲ್ಲ. ಈಚೆಗೆ ಭಾರತದಲ್ಲಿ ನರ್ಸರಿ ಶಾಲೆಗಳು ಆ ಪದ್ಧತಿಗಳ ಉತ್ತಮಾಂಶಗಳನ್ನು ಅಳವಡಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆಗೊಳ್ಳುತ್ತಿವೆ.

ಅವಶ್ಯಕತೆ: ಆಧುನಿಕ ಯುಗದಲ್ಲಿ ಜೀವನದ ಮಟ್ಟ ಹೆಚ್ಚಿದಂತೆ ಕುಟುಂಬದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಅನಿವಾರ್ಯವಾಗಿ ಬರುತ್ತಿದೆ. ಅದಕ್ಕಾಗಿ ಗಂಡಸರಂತೆ ಹೆಂಗಸರೂ ಯಾವುದಾದರೂ ಕೆಲಸಕ್ಕೆ ಸೇರಬೇಕಾಗುತ್ತದೆ. ತಾಯಂದಿರು ಮನೆಯಿಂದ ಹೊರಗೆ ಕೆಲಸಕ್ಕೆ ಹೋಗಿರುವ ಕಾಲದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಏನಾದರೂ ವ್ಯವಸ್ಥೆ ಮಾಡಬೇಕಾಗುತ್ತದೆ. ಅನೇಕ ಕುಟುಂಬಗಳಿಗೆ ಇದು ಸಾಧ್ಯವಾಗಲಾರದು. ತಂದೆತಾಯಿಯರು ಮಕ್ಕಳನ್ನು ನೋಡಿಕೊಳ್ಳಬಹುದಾದ ಮನೆಗಳಲ್ಲೂ ಅವರಿಗೆ ಆ ಕಾರ್ಯದಲ್ಲಿ ಶಾಸ್ತ್ರೀಯ ರೀತಿಯ ಅನುಭವ ಇಲ್ಲದಿರಬಹುದು. ಬಡಕುಟುಂಬಗಳ ಮಕ್ಕಳಂತೂ ಕೊಳಚೆಯಲ್ಲಿ ದಿಕ್ಕಿಲ್ಲದೆ ಅಲೆದಾಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಎಲ್ಲ ಸಾಮಾಜಿಕ ವರ್ಗದ ಕುಟುಂಬಗಳ ಮಕ್ಕಳಿಗೂ ಶಿಶುವಿಹಾರಗಳು ಅಗತ್ಯವೆನಿಸುತ್ತದೆ.

ಕಾರ್ಯಕ್ರಮ: ಅಸಹಾಯಸ್ಥಿತಿಯ ಶೈಶವಕ್ಕೆಂದು ರೂಪುಗೊಂಡಿರುವ ಯಾವ ಸಂಸ್ಥೆಯೇ ಆಗಲಿ ಕುಟುಂಬದ ಪ್ರತಿರೂಪವಾಗಿದ್ದು ಅಲ್ಲಿನ ಶಿಕ್ಷಕಿಯರು ತಾಯಂದಿರ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕುಟುಂಬದಲ್ಲಿರುವ ಎಲ್ಲ ಸೌಲಭ್ಯಗಳೂ ಅಲ್ಲಿ ಇಲ್ಲದಿದ್ದರೂ ಕುಟುಂಬದಲ್ಲಿಲ್ಲದ ಹಲವು ಸೌಕರ್ಯಗಳು ಅಲ್ಲಿರುತ್ತವೆ. ಮಕ್ಕಳು ಹೆಚ್ಚು ಚಟುವಟಿಕೆಯಿಂದಲೂ ತೇಜಸ್ಸಿನಿಂದಲೂ ಜೀವಿಸುತ್ತ ವ್ಯವಸ್ಥಿತ ರೀತಿಯಲ್ಲಿ ಅನುಭವಗಳನ್ನು ಸಾಧಿಸುವ ಅವಕಾಶ ಅಲ್ಲಿರುತ್ತದೆ. ಜೊತೆಗೆ ಮನೆಯಲ್ಲಿ ದೊರಕದ ಸಮವಯಸ್ಕರ ಸಮಾಜಜೀವನವು ಅಲ್ಲಿ ಲಭ್ಯವಾಗುತ್ತದೆ.

ನರ್ಸರಿ ಶಾಲೆಯ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯಪಾಲನೆ ಮತ್ತು ದೇಹರಕ್ಷಣೆಗಳಿಗೆ ಪ್ರಥಮ ಪ್ರಾಶಸ್ತ್ಯವುಂಟು. ದೇಹಪರೀಕ್ಷೆ ನಡೆಸಿ ವೈದ್ಯಚಿಕಿತ್ಸೆ ನಡೆಸುವುದಕ್ಕೂ ಸರಿಯಾದ ಆಹಾರಪೋಷಣೆಗೂ ಅಲ್ಲಿ ಅವಕಾಶವಿರುತ್ತದೆ. ಮಕ್ಕಳ ಕಣ್ಣು, ಕಿವಿ, ಹಲ್ಲು, ಮನಸ್ಸಿನ ಪರಿಸ್ಥಿತಿ, ಜೊತೆಯವರೊಡನೆ ನಡೆದುಕೊಳ್ಳುವ ರೀತಿ ಇವನ್ನೆಲ್ಲ ಪರೀಕ್ಷಿಸಿ ಅಗತ್ಯವಾದ ಚಿಕಿತ್ಸೆಗೆ ಏರ್ಪಡಿಸುವರು. ಇದರಿಂದ ಮುಂದೆ ಒದಗಬಹುದಾದ ಅಂಗವಿಕಲತೆ, ಅಂಟುರೋಗಗಳು ಮತ್ತು ಸಾಮಾಜಿಕ ಅನ್ವಯ ಹೀನತೆ ಇವೆಲ್ಲ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಎಂದರೆ ನರ್ಸರಿ ಶಾಲೆಗಳು ದೃಢಕಾಯರೂ ಆರೋಗ್ಯವಂತರೂ ಆದ ಜನರ ನಿರ್ಮಾಣಕ್ಕೆ ಅಸ್ತಿಭಾರ ಹಾಕುತ್ತವೆ.

ಈ ಶಾಲೆಗಳು ಮಕ್ಕಳ ರಕ್ಷಣೆಯ ಕಡೆ ಗಮನ ಕೊಡುವುದರ ಜೊತೆಗೆ ಅಲ್ಲಿನ ಸನ್ನಿವೇಶಗಳು ಅವರಿಗೆ ಆನಂದವನ್ನೂ ಉತ್ಸಾಹವನ್ನೂ ನೀಡುವಂತಿರುತ್ತವೆ. ಮಮತೆಯಿಂದಲೂ ಸಲುಗೆಯಿಂದಲೂ ತಾಯಿಯ ಪ್ರತಿರೂಪದಂತಿರುವ ಅಲ್ಲಿನ ಅಧ್ಯಾಪಕಿಯರೊಡನೆ ತಮಗೆ ತೋಚಿದ್ದನ್ನು ಹೇಳುತ್ತಲೂ ತಿಳಿಯದ್ದನ್ನೂ ಕೇಳಿ ತಿಳಿದುಕೊಳ್ಳುತ್ತಲೂ ಅಲ್ಲಿ ಇರುವ ಆಟದ ಸಾಮಾನುಗಳನ್ನೂ ಉಪಕರಣಗಳನ್ನೂ ಬಳಸಿಕೊಂಡು ಆಡುತ್ತಿರುವುದು ಮಕ್ಕಳ ನಿತ್ಯದ ಕ್ರಮವಾಗಿರುತ್ತದೆ. ಅಂದಿಗಂದಿಗೆ ಅವರನ್ನು ಅಕ್ಕಪಕ್ಕದ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ಕಂಡುಬರುವ ಅಂಶಗಳನ್ನು ಪರಿಚಯ ಮಾಡಿಕೊಡುವ ಅವಕಾಶವೂ ಇರುತ್ತದೆ. ಇಂಥ ಜೀವನಕ್ರಮದಿಂದ ಮಕ್ಕಳಲ್ಲಿ ತೃಪ್ತಿಸಂತೋಷಗಳು ನೆಲೆಸುವಂತಾಗಿ ಕುತೂಹಲ, ಸಹಕಾರ, ಸೌಹಾರ್ದ ಮುಂತಾದ ಸದ್ಗುಣಗಳು ವೃದ್ಧಿಯಾಗಿ ಮುಂದಿನ ಜೀವನದಲ್ಲಿ ಸತ್ಕಾರ್ಯಗಳನ್ನು ಕೈಕೊಂಡು ನಿರ್ವಹಿಸುವ ಶಕ್ತಿಸಾಹಸಗಳನ್ನು ಮೂಡಿಸುತ್ತದೆ.

ನರ್ಸರಿ ಶಾಲೆ ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಪಿಸಿ ಬೆಳೆಯಲು ಅವಕಾಶ ಕಲ್ಪಿಸಿಕೊಂಡಿರುತ್ತದೆ. ಮುಖ, ಹಲ್ಲು, ಕೈಕಾಲುಗಳನ್ನು ಚೊಕ್ಕಟವಾಗಿಟ್ಟುಕೊಳ್ಳುವುದು; ಊಟ, ತಿಂಡಿ ಮುಂತಾದವನ್ನು ತಿನ್ನುವಾಗ ಒಳ್ಳೆಯ ಅಭ್ಯಾಸಗಳನ್ನು ಅನುಸರಿಸುವುದು; ಶೌಚಗೃಹವನ್ನು ಎಚ್ಚರಿಕೆಯಿಂದ ಬಳಸುವುದು; ಸರಿಯಾಗಿ ಉಡುಪನ್ನು ಧರಿಸುವುದು; ನಡೆಯುವಾಗ, ನಿಲ್ಲುವಾಗ, ಕೂಡುವಾಗ ಇತರರೊಡನೆ ಆಡುವಾಗ, ಮಾತಾಡುವಾಗ ಸರಿಯಾದ ಮಾರ್ಗದರ್ಶನವನ್ನು ಅನುಸರಿಸುವುದು-ಇವೇ ಮುಂತಾದ ದಿನಚರಿ ಅಭ್ಯಾಸಗಳನ್ನು ಅಲ್ಲಿ ರೂಢಿಸಲಾಗುತ್ತದೆ. ಅವು ಅನಂತರ ಮಕ್ಕಳ ಮನೆಯ ಜೀವನದಲ್ಲೂ ಆಚರಣೆಗೆ ಬಂದು ಮುಂದಿನ ಜೀವನದಲ್ಲಿ ದೃಢವಾಗಿ ನೆಲೆಸುತ್ತವೆ. ಆ ಮೂಲಕ ಅವರಲ್ಲಿ ಸ್ವಾವಲಂಬನೆಯನ್ನೂ ತಮ್ಮ ಸಾಮಥ್ರ್ಯಗಳಲ್ಲಿ ನಂಬಿಕೆಯನ್ನೂ ಸ್ವಯಂಪ್ರೇರಿತ ಶಿಸ್ತನ್ನೂ ಬೆಳೆಸಲಾಗುತ್ತದೆ.

ನರ್ಸರಿ ಶಾಲೆಯಲ್ಲಿ ಕಟ್ಟುನಿಟ್ಟಾದ ವೇಳಾಪಟ್ಟಿ ಇರುವುದಿಲ್ಲವಾದರೂ ಅಲ್ಲಿನ ಕಾರ್ಯಕ್ರಮಗಳೆಲ್ಲ ಒಂದು ನಿಯಮದ ಅಚ್ಚುಕಟ್ಟಿನಲ್ಲಿ ನಡೆಯುತ್ತವೆ. ಆದ್ದರಿಂದ ಮಕ್ಕಳ ಜೀವನದಲ್ಲೂ ನೀತಿನಿಯಮಗಳೂ, ವ್ಯವಸ್ಥೆಯ ಅಚ್ಚುಕಟ್ಟೂ ಸ್ವಾಭಾವಿಕವಾಗಿ ಮೂಡುತ್ತವೆ. ಕಟುಬಲುಮೆಯ ವೇಳಾಪಟ್ಟಿಯಿಲ್ಲದ್ದರಿಂದ ಸ್ವಪ್ರೇರಣೆಯ ಚಟುವಟಿಕೆಗಳಲ್ಲಿ ತೊಡಗಿರುವಾಗ ಸ್ವಯಂಪ್ರೇರಿತ ಶಿಸ್ತು ಸ್ವಾಭಾವಿಕವಾಗಿ ನೆಲೆಸಿರುತ್ತದೆ. 

ನರ್ಸರಿ ಶಾಲೆಯಲ್ಲಿ ಮೇಲಿನ ಕಾರ್ಯಕ್ರಮಗಳ ಜೊತೆಗೆ ಅಭಿರುಚಿಯನ್ನೂ ಭಾಷಾಶಕ್ತಿಯನ್ನೂ ಬೆಳೆಸುವ ಚಟುವಟಿಕೆಗಳಿಗೆ ಅವಕಾಶವಿರುತ್ತದೆ. ಈ ಭಾಷೇತರ ಚಟುವಟಿಕೆಗಳನ್ನು ಸ್ವತಂತ್ರ ಮತ್ತು ನಿರ್ದೇಶಿತ ಚಟುವಟಿಕೆಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು.

ಸ್ವತಂತ್ರ ಚಟುವಟಿಕೆಗಳು: ಮಕ್ಕಳ ಸ್ವಾಭಾವಿಕ ಆಸಕ್ತಿ ಅವರನ್ನು ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುತ್ತವೆ. ಆ ಪ್ರೇರಣೆಯನ್ನು ಬಳಸಿಕೊಂಡು ಅವರ ಆ ಶಕ್ತಿಗಳ ಪ್ರಕಾಶಕ್ಕೆ ನರ್ಸರಿ ಶಾಲೆಗಳಲ್ಲಿ ಅವಕಾಶ ಕಲ್ಪಿಸಿರುವರು. ಅದಕ್ಕಾಗಿ ದೊಡ್ಡ ದೊಡ್ಡ ಆಟದ ಸಾಮಾನು, ಕೈಗಾಡಿ, ಚಕ್ರ, ಗೊಂಬೆ, ಅದರ ಉಡುಗೆತೊಡುಗೆ, ಪೆಟ್ಟಿಗೆ, ಮಣೆ, ತುಂಡು, ಮುಂತಾದವನ್ನು ಒದಗಿಸುವರು. ತೂಗುಚಕ್ರ, ಉಯ್ಯಾಲೆ, ಏಣಿಯ ಮೆಟ್ಟಿಲು, ಜಾರುಬಂಡೆ, ಜಗ್ಗುಮಣಿ ಮುಂತಾದವುಗಳನ್ನು ಬಳಸಿಕೊಂಡು ಆಟವಾಡಲು ಅವಕಾಶವೀಯುವರು ಅದರಿಂದ ಮಕ್ಕಳ ದೊಡ್ಡ ಸ್ನಾಯುಗಳು ಕೆಲಸಮಾಡುವಂತಾಗಿ ಅವು ಬಲಗೊಳ್ಳುವುದರ ಜೊತೆಗೆ ಆ ರೀತಿಯ ಕಾರ್ಯಗಳಲ್ಲಿ ಮಕ್ಕಳಿಗೆ ಅಭ್ಯಾಸವೂ ಕೌಶಲ್ಯವೂ ಸಿದ್ಧಿಸುತ್ತದೆ. ಬಾಗಿಲನ್ನು ತೆಗೆಯುವುದು, ಕಿಟಕಿ ಮುಚ್ಚುವುದು, ಮೇಜು ಒರೆಸುವುದು, ಹೂಜಿಯಲ್ಲಿ ಹೂಗೊನೆಗಳನ್ನಿಟ್ಟು ಸಿಂಗರಿಸುವುದು, ನೀರು ಸೇದುವುದು, ಗುಳಿ ತೆಗೆಯುವುದು, ಸಣ್ಣಪುಟ್ಟ ಉಪಕರಣಗಳನ್ನು ಬಳಸುವುದು ಮುಂತಾದ ಚಟುವಟಿಕೆಗಳಿಗೂ ಅವಕಾಶವಿದ್ದು ಅವರ ನಿತ್ಯಜೀವನದ ಕಾರ್ಯಗಳಲ್ಲೂ ಕೌಶಲ್ಯ ಸಿದ್ಧಿಸುತ್ತದೆ. ತೋಟದಲ್ಲಿ ಹೂಗಿಡಗಳನ್ನು ಬೆಳೆಸುವುದು, ಮರಿಗಳನ್ನು ಸಾಕುವುದು ಮುಂತಾದ ಚಟುವಟಿಕೆಗಳಿಂದ ಅವರಲ್ಲಿ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುವ ಗುಣ ವರ್ಧಿಸುತ್ತದೆ. ಮಣೆ, ಕಡ್ಡಿ, ತುಂಡು ಮುಂತಾದವನ್ನು ಒಂದೆಡೆ ಕುಳಿತು ಜೋಡಿಸಿ ತಮ್ಮಿಷ್ಟಬಂದ ಆಕೃತಿಗಳನ್ನು ರಚಿಸುವುದು, ಕಾಗದವನ್ನು ಕತ್ತರಿಸಿ ಆಕೃತಿ ರಚಿಸುವುದು, ಬಣ್ಣದ ಸೀಮೆಸುಣ್ಣಗಳಿಂದ ಚಿತ್ರಬರೆಯುವುದು, ಗೊಂಬೆಗೆ ಒಡವೆ ಮಾಡುವುದು-ಇವೇ ಮುಂತಾದ ಚಟುವಟಿಕೆಗಳಿಂದ ಅವರ ಮನೋಭಾವನೆಗಳಿಗೆ ಮೂರ್ತಸ್ವರೂಪವನ್ನು ಕೊಡುವ ಯತ್ನ ನಡೆದು ಮಿದುಳಿನ ಸಣ್ಣ ಮಾಂಸಖಂಡಗಳಿಗೂ ತಕ್ಕಷ್ಟು ಚಟುವಟಿಕೆ ದೊರಕುತ್ತದೆ. ಉಪಕರಣಗಳನ್ನು ಬಳಸುವಾಗ ಒಂದಲ್ಲ ಒಂದು ರೀತಿಯ ಉಪಯುಕ್ತ ಶಿಕ್ಷಣ ದೊರಕುವಂಥ ಚಟುವಟಿಕೆಗಳಿಗೂ ಅಲ್ಲಿ ಅವಕಾಶ ಉಂಟು.

ನಿರ್ದೇಶಿತ ಚಟುವಟಿಕೆಗಳು: ಸ್ವತಂತ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಮಕ್ಕಳು ಅನಂತರ ಸಾಮೂಹಿಕ ಚಟುವಟಿಕೆಗಳಲ್ಲಿ ಅಧ್ಯಾಪಕಿಯರ ನಿರ್ದೇಶನದಲ್ಲಿ ಪಾತ್ರವಹಿಸುವರು. ಹಾಡುವುದು, ಕುಣಿಯುವುದು, ನೃತ್ಯಗೀತೆ, ತಾಳಬದ್ಧಕವಾಯಿತು, ಸಮಾಚಾರ ತಿಳಿಯುವುದು, ಕಥೆ ಹೇಳುವುದು, ಕಥೆ ಕೇಳುವುದು, ಚರ್ಚೆ, ಚಿತ್ರಗಳ ವಿವರಣೆ-ಇವೇ ಮುಂತಾದ ಸಾಮೂಹಿಕ ಚಟುವಟಿಕೆಗಳಲ್ಲಿ ಉಪಾಧ್ಯಾಯರು ಮಕ್ಕಳನ್ನು ನಿರ್ದೇಶಿಸುವರು. ಆಗಾಗ ಹತ್ತಿರದ ಹಳ್ಳಿ, ಉದ್ಯಾನ, ಪ್ರಾಣಿಸಂಗ್ರಹಾಲಯ, ಕಾರ್ಖಾನೆ, ರೈಲು ನಿಲ್ದಾಣ, ಸೇತುವೆ, ಮನೆ ಕಟ್ಟುತ್ತಿರುವ ಸ್ಥಳ - ಮುಂತಾದೆಡೆಗೆ ಅವರನ್ನು ಕರೆದುಕೊಂಡು ಹೋಗಲಾಗುವುದು. ಈ ಕಾರ್ಯಕ್ರಮಗಳಿಂದ ಮಕ್ಕಳ ಜೀವನ ವಿಕಸಿಸಿ ಅನುಭವ ವಿಸ್ತರಿಸಲು ಅವಕಾಶವಾಗುತ್ತದೆ. 
ಶಿಕ್ಷಣ: ನರ್ಸರಿ ಶಾಲೆಯಲ್ಲಿ ಓದುಬರಹ ಲೆಕ್ಕಗಳನ್ನು ಕಲಿಸುವುದಿಲ್ಲ. ಆದರೆ ಉತ್ಸಾಹದಾಯಕವೂ ಆನಂದಮಯವೂ ಆದ ಜೀವನ ನಡೆಸುತ್ತ ಮಕ್ಕಳು ಸ್ವಲ್ಪ ಹೊತ್ತು ಸ್ವತಂತ್ರ ಚಟುವಟಿಕೆಗಳಲ್ಲಿ ತೊಡಗುವರು; ಅನಂತರ ವಿಶ್ರಾಂತಿ ಪಡೆದು ಅಧ್ಯಾಪಕರ ನಿರ್ದೇಶನದಲ್ಲಿ ಸಾಮೂಹಿಕ ಚಟುವಟಿಕೆಗಳಲ್ಲಿ ಪಾತ್ರವಹಿಸುವರು; ಅಗತ್ಯವೆನಿಸಿದಾಗ ಅಧ್ಯಾಪಕರು ನಿರ್ದೇಶನ ನೀಡುವರು. ಇವಷ್ಟೇ ಅಲ್ಲಿ ಅವರಿಗೆ ದೊರಕುವ ಶಿಕ್ಷಣ. ಇದು ಸಾಂಪ್ರದಾಯಿಕ ಶಿಕ್ಷಣವಲ್ಲವಾದರೂ ಮುಂದೆ ಪ್ರಾಥಮಿಕ ಶಾಲೆಯಲ್ಲಿ ಆ ಶಿಕ್ಷಣವನ್ನು ಪಡೆಯಲು ನೆರವಾಗಬಲ್ಲ ಪೂರ್ವಭಾವಿ ಶಿಕ್ಷಣ ಇದೆ ಎಂದು ಪರಿಗಣಿಸಬಹುದು. ಅಲ್ಲಿನ ಚಟುವಟಿಕೆಯ ಕಾರ್ಯಕ್ರಮಗಳಿಂದ ಅವರ ಕಣ್ಣು, ಕಿವಿ, ಕೈ ಮುಂತಾದ ಅಂಗಗಳು ಪಳಗಿ ಹೆಚ್ಚಿನ ಅನುಭವ ಪಡೆಯಲು ನೆರವಾಗುವುವು. ಅಂಗ ಚಲನೆಯಲ್ಲಿ ಸೌಲಭ್ಯವೂ ಕೌಶಲ್ಯವೂ ವರ್ಧಿಸಿ ರಚನಾ ಕಾರ್ಯಗಳಿಗೆ ಒದಗುವಂತೆ ಹಸ್ತಪಾಟವ ಹೆಚ್ಚುವುದು. ನೃತ್ಯಗೀತೆ, ತಾಳಬದ್ಧ ಚಟುವಟಿಕೆ, ಚಿತ್ರರಚನೆ ಇವುಗಳ ಮೂಲಕ ಅವರಲ್ಲಿ ಸೌಂದರ್ಯ ಪ್ರೇಮ ಹೆಚ್ಚುವುದು. ಒಳ್ಳೆಯ ಅಭ್ಯಾಸಗಳು, ಒಳ್ಳೆಯ ಗುಣಗಳು ಯಾವುವು ಎಂಬುದರ ಪರಿಚಯವೂ ಅಭ್ಯಾಸವೂ ಆಗುವುದು. ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಂತೆ ಮಕ್ಕಳ ಭಾಷಾಶಕ್ತಿಯೂ ಬೆಳೆಯುವುದು. ಇವೆಲ್ಲ ಕಾರಣಗಳಿಂದ ನರ್ಸರಿ ಶಾಲೆಯಿಂದ ಬರುವ ಮಕ್ಕಳು ಪ್ರಾಥಮಿಕ ಶಾಲೆಯಲ್ಲಿ ಇತರ ಮಕ್ಕಳಿಗಿಂತ ಹೆಚ್ಚಿನ ವೇಗದಲ್ಲಿ ಶಿಕ್ಷಣ ಸಾಧಿಸಲು ಶಕ್ತರಾಗುತ್ತಾರೆ.

ಭಾಷಾಶಕ್ತಿಯ ಬೆಳವಣಿಗೆ: ನರ್ಸರಿಶಾಲೆಗೆ ಬರುವ ಹೊತ್ತಿಗೆ ಮಕ್ಕಳಿಗೆ ಹಲವು ಅನುಭವಗಳು ದೊರೆತಿರುತ್ತವೆ. ತಾವು ಕಂಡ ವಸ್ತುಗಳನ್ನೂ ಸನ್ನಿವೇಶಗಳನ್ನೂ ಪದಗಳ ಮೂಲಕ ಸೂಚಿಸಲು ಯತ್ನಿಸುತ್ತಾರೆ; ಮನಸ್ಸಿನ ಇತರ ಭಾವಗಳನ್ನೂ ತಿಳಿಸಲು ಯತ್ನಿಸುತ್ತಾರೆ. ಕೆಲವು ವೇಳೆ ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ಳುತ್ತಾರೆ. ಶಾಲೆಯಲ್ಲಿ, ಬಯಲಿನಲ್ಲಿ ಯಾವುದಾದರೂ ಹೊಸದನ್ನು ಕಂಡಾಗ, ಕೇಳಿದಾಗ ಅದು ಏನು, ಅದು ಹೇಗೆ ಇತ್ಯಾದಿ ಪ್ರಶ್ನೆ ಹಾಕುತ್ತಾರೆ. ಅಲ್ಲದೆ ಅಲ್ಲಿಗೆ ಬರತಕ್ಕ ಮಕ್ಕಳು ಬೇರೆ ಬೇರೆ ವರ್ಗಗಳ ಕುಟುಂಬಗಳಿಂದ ಬಂದಿರುವುದರಿಂದ ಅವರಿಗೆ ಸಿದ್ಧಿಸಿರುವ ಮಾತಾಡುವ ಶಕ್ತಿಯಲ್ಲೂ ಭಿನ್ನ ಭಿನ್ನ ಮಟ್ಟಗಳಿರುತ್ತವೆ. ಆದ್ದರಿಂದ ಒಬ್ಬರ ಕುತೂಹಲವನ್ನು ನಿವಾರಿಸಲು ಇನ್ನೊಬ್ಬರು ಯತ್ನಿಸುವಾಗ ಹೊಸ ಹೊಸ ಪದಗಳ ಪರಿಚಯವಾಗುವ ಅವಕಾಶವಿರುತ್ತದೆ. ಮಕ್ಕಳು ಇಂದ್ರಿಯಗಳ ಮೂಲಕ ವಸ್ತು, ಸನ್ನಿವೇಶ, ವ್ಯಕ್ತಿ ಮುಂತಾದವನ್ನು ನೋಡಿದಾಗ ಅವುಗಳ ಗುಣಗಳನ್ನು ತಿಳಿಯಲು ಅಥವಾ ಹೇಳಲು ಹೊಸ ಪದಗಳ ಅಗತ್ಯವನ್ನು ಕಾಣುತ್ತಾರೆ. ಅವನ್ನು ಜೊತೆಗಾರರಿಂದಲೊ ಅಧ್ಯಾಪಕಿಯರಿಂದಲೊ ಪಠಿಸುತ್ತಿರುವ ಗೀತೆಗಳಿಂದಲೋ ಕಲಿತುಕೊಳ್ಳುತ್ತಾರೆ. ಅಲ್ಲಿನ ಸಮಾಜ ಜೀವನದಲ್ಲಿ ಪರಿಚಯವಾಗುವ ಅನುಭವಗಳನ್ನೂ ಸೂಚಿಸುವ ಪದಗಳನ್ನೂ ಅದೇ ರೀತಿ ಕಲಿಯುತ್ತಾರೆ. ಶಾಲೆಯಲ್ಲೂ ಹೊರಗೂ ನೋಡುವ ಅನೇಕ ವಸ್ತುಗಳ ಹೆಸರೂ ಪರಿಚಯಕ್ಕೆ ಬರುತ್ತವೆ. ಓದು ಬರೆಹ ಕಲಿಸದಿದ್ದರೂ ಅಲ್ಲಿ ಆಟ, ಚಟುವಟಿಕೆ, ಮಾತುಗಾರಿಕೆ, ಕಥೆ ಹೇಳುವುದು, ಕಥೆ ಕೇಳುವುದು, ಕಂಡ ವಸ್ತುಗಳನ್ನು ವಿವರಿಸುವುದು ಮುಂತಾದ ಭಾಷಾ ಚಟುವಟಿಕೆಗಳಿರುವುದರಿಂದ ಅವರ ಪದ ಸಂಪತ್ತು ಹೆಚ್ಚುತ್ತದೆ. ತಮ್ಮ ಜೊತೆಗಾರರ ಕುತೂಹಲವನ್ನು ನಿವಾರಿಸಲು ಯತ್ನಿಸುವಾಗ, ತಮ್ಮ ಭಾವನೆಗಳನ್ನು ಸೂಚಿಸುವಾಗ ಅವರ ಅಭಿವ್ಯಕ್ತಿಶಕ್ತಿ ವರ್ಧಿಸುತ್ತದೆ. ತಾವು ಏನನ್ನಾದರೂ ಹೇಳಬೇಕೆನಿಸಿದರೆ ಕೇಳಲು ಜೊತೆಗಾರರಿರುತ್ತಾರೆ; ಅಭಿವ್ಯಕ್ತಿಯ ಬೆಳವಣಿಗೆಗೆ ಇದು ಪ್ರೋತ್ಸಾಹದಾಯಕ ಸನ್ನಿವೇಶವೆನಿಸುತ್ತದೆ; ಇದರಿಂದ ಮಕ್ಕಳಲ್ಲಿ ಮಾತಾಡುವ ಬಯಕೆ ಹೆಚ್ಚುತ್ತದೆ. ಶೈಶವದಲ್ಲಿ ಮಕ್ಕಳು ಕಥೆ ಹೇಳುವುದರಲ್ಲಿ ಆಸಕ್ತಿ ತೋರುವಂತೆ ಕೇಳಿದ್ದನ್ನು ಅಭಿನಯಿಸುವುದರಲ್ಲೂ ಆಸಕ್ತಿ ವ್ಯಕ್ತಪಡಿಸುತ್ತಾರೆ. ಆದ್ದರಿಂದ ನರ್ಸರಿ ಶಾಲೆಗಳಲ್ಲಿ ಸಂವಾದ, ನಾಟಕ ಮುಂತಾದ ಕಾರ್ಯಕ್ರಮಗಳಿಗೂ ಅವಕಾಶವುಂಟು. ಆ ಮೂಲಕವೂ ಮಕ್ಕಳ ಭಾಷಾಶಕ್ತಿ ಉತ್ತಮಗೊಳ್ಳುತ್ತದೆ.

ಭಾವನೆ, ಕಲ್ಪನೆ ಮತ್ತು ಆಲೋಚನೆಗಳ ಬೆಳವಣಿಗೆ: ಶೈಶವದಲ್ಲಿ ಹೊಸ ಹೊಸ ಸನ್ನಿವೇಶಗಳ ಪರಿಚಯವಾದಂತೆ ಮಕ್ಕಳು ಬಗೆಬಗೆಯ ಪ್ರಶ್ನೆ ಕೇಳುತ್ತಾರೆ. ಅವರ ಪ್ರಶ್ನೆಗೆ ಉತ್ತರ ಹೇಳಲು ಜೊತೆಗಾರರೂ ಅಧ್ಯಾಪಕಿಯರೂ ಇರುತ್ತಾರೆ. ಇದರ ಫಲವಾಗಿ ಮಕ್ಕಳಿಗೆ ಹೊಸ ಪದಗಳೂ ಭಾವನೆಗಳೂ ಪರಿಚಯವಾಗುತ್ತದೆ. ಅವನ್ನು ಬಳಸಿಕೊಂಡು ಮಕ್ಕಳು ತಾವೇ ಕಲ್ಪಿಸಿಕೊಂಡ ನೂತನ ವಸ್ತು, ವ್ಯಕ್ತಿ ಸನ್ನಿವೇಶ ಮುಂತಾದವನ್ನು ಹೇಳುತ್ತಿರುತ್ತಾರೆ. ಅಂಥ ವಸ್ತು ವ್ಯಕ್ತಿ ಸನ್ನಿವೇಶಗಳು ವಾಸ್ತವವಾಗಿ ಇಲ್ಲದಿರದಿದ್ದರೂ ಹಾಗೆ ಸೂಚಿಸಲು ಅವರ ಕಲ್ಪನಾಶಕ್ತಿ ಪ್ರಚೋದಿಸುತ್ತಿರುತ್ತದೆ. ಅವರ ಮನಸ್ಸಿನಲ್ಲಿ ಭಾವನೆಗಳೂ ಅವನ್ನು ಹೊತ್ತಿರುವ ಪದಸಂಪತ್ತೂ ಹೆಚ್ಚಿದಂತೆ ಅವನ್ನು ಬಳಸಿಕೊಂಡು ಆಲೋಚಿಸುವ ಶಕ್ತಿಯೂ ವರ್ಧಿಸುತ್ತದೆ. ನರ್ಸರಿ ಶಾಲೆಯಲ್ಲಿ ರೂಢಿಸುವ ಮಕ್ಕಳ ಈ ಸಾಧನೆ ಮುಂದೆ ಪ್ರಾಥಮಿಕ ಶಾಲೆಯಲ್ಲಿ ವಿಷಯವನ್ನು ಗ್ರಹಿಸಲು ನೆರವಾಗುತ್ತದೆ.

ಕಟ್ಟಡ ಮತ್ತು ಉಪಕರಣಗಳು: ನರ್ಸರಿ ಶಾಲೆಯ ಕಟ್ಟಡ ಸರಳವಾಗಿ ಅತಿ ಎತ್ತರವಿಲ್ಲದೆ ಗಾಳಿ-ಬೆಳಕುಗಳ ಸಂಚಾರಕ್ಕೆ ಅವಕಾಶವಾಗುವಂತೆ ಕಟ್ಟಿರಬೇಕು. ಮಕ್ಕಳು ಓಡಾಡಲು ಒಳಗೂ ಹೊರಗೂ ತಕ್ಕಷ್ಟು ಅವಕಾಶವಿರಬೇಕು. ಮಕ್ಕಳು ಒಳಕ್ಕೆ ಬರುವುದಕ್ಕೂ ಹೊರಕ್ಕೆ ಹೋಗುವುದಕ್ಕೂ ಅನುಕೂಲಿಸುವಂತೆ ದೊಡ್ಡ ಬಾಗಿಲು ಇರಬೇಕು. ಸರಾಗವಾಗಿ ಗಾಳಿ ಒಳಗೆ ಬರಲು ಅನುಕೂಲವಾಗುವಂತೆ ಒಂದು ಕಡೆ ಗೋಡೆಗೆ ಬದಲು ಜಾಲರಿ ಬಲೆ ಹಾಕಿರಬೇಕು. ಮಕ್ಕಳು ಆಡುವ ಕೊಠಡಿಯ ಬಳಿ ಉಪಕರಣಗಳ ಉಗ್ರಾಣವೂ ಶಿಕ್ಷಕಿಯರ ಕೊಠಡಿಯೂ ಅದರ ಪಕ್ಕದಲ್ಲಿ ಸ್ನಾನದ ಮನೆಯೂ ಇರಬೇಕು; ಅದರ ಇನ್ನೊಂದು ಪಕ್ಕದಲ್ಲಿ ಉಪಾಹಾರದ ಸ್ಥಳವೂ ವಿಶ್ರಾಂತಿ ಕೊಠಡಿಯೂ ಇರಬಹುದು. ಧೂಳು, ಶಬ್ದ, ಅಷ್ಟಾಗಿ ಇರದ ಹೆದ್ದಾರಿಗೆ ದೂರದಲ್ಲಿ ಕಟ್ಟಡದ ನಿವೇಶನ ಇದ್ದರೆ ಒಳ್ಳೆಯದು. ಅದರಿಂದ ಮಕ್ಕಳು ಸಾರಿಗೆ ವಾಹನಗಳ ಆಕಸ್ಮಿಕಗಳಿಗೆ ಸಿಕ್ಕುವುದೂ ತಪ್ಪುತ್ತದೆ. ಮನೆಯಿಂದ ಬಹುದೂರದಲ್ಲಿ ಶಾಲೆಯನ್ನು ನಡೆಸುವುದು ಉಚಿತವಲ್ಲ. ಹಾಗಲ್ಲದಲ್ಲಿ ಮಕ್ಕಳು ಹೋಗಿಬರಲು ಯುಕ್ತ ಸಾರಿಗೆ ವ್ಯವಸ್ಥೆ ಇರಬೇಕಾಗುತ್ತದೆ. ಅಥವಾ ಮನೆಮನೆಗೂ ಸೇವಕಳನ್ನು ಕಳಿಸಿ ಮಕ್ಕಳನ್ನು ಕರೆದು ತರಬೇಕಾಗುತ್ತದೆ, ಮತ್ತೆ ಅವರನ್ನು ಜೊತೆಗೂಡಿ ಮನೆಗೆ ಕಳಿಸಬೇಕಾಗುತ್ತದೆ. ಕಟ್ಟಡಕ್ಕೆ ಸೇರಿದಂತೆ ಶೌಚಗೃಹವಿರಬೇಕು. ಮಕ್ಕಳು ಕೈಕಾಲುಗಳನ್ನು ತಾವೇ ತೊಳೆದುಕೊಳ್ಳಲು ಅನುಕೂಲಿಸುವಂತೆ ನಲ್ಲಿ ಕೆಳಭಾಗದಲ್ಲಿ ಇರಬೇಕು. ಹತ್ತಿರದಲ್ಲಿ ಸಾಬೂನು, ವಸ್ತ್ರ ಮುಂತಾದವನ್ನು ಇರಿಸಲು ಸ್ಥಳ ಮಾಡಿರಬೇಕು. ಮಕ್ಕಳು ಅವನ್ನೆಲ್ಲ ಬಳಸುವ ಅಭ್ಯಾಸವನ್ನು ಬೆಳೆಸಬೇಕು. ಅಲ್ಲಿ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಶೀತವಾಗದಂತೆ ನೆಲಕ್ಕೆ ನಯವಾಗಿ ಸಿಮೆಂಟ್ ಗಾರೆ ಹಾಕಿರಬೇಕು.

ಮಕ್ಕಳು ಬಳಸುವ ಕುರ್ಚಿ, ಮೇಜು, ಮಂಚ, ಗೋಡೆಯ ಗೂಡು, ಬೀರು ಮುಂತಾದವನ್ನು ಅವರ ವಯೋಗುಣಕ್ಕೆ ಯುಕ್ತವೆನಿಸುವ ಆಕಾರದಲ್ಲಿ ಎತ್ತರದಲ್ಲಿ ಮಾಡಿಸಿರಬೇಕು. ಆಟಕ್ಕೆ ಬಳಸುವ ಉಪಕರಣಗಳನ್ನು ಸುಲಭವಾಗಿ ಅವರಿಗೆ ದೊರಕುವಂತೆ ಜೋಡಿಸಿರಬೇಕು. ಸರಾಗವಾಗಿ ಬಳಸುವ ಗಾತ್ರದಲ್ಲಿ ಅವನ್ನು ಮಾಡಿಸಿರಬೇಕು. ಶಾಲೆಯ ಹೊರಬಯಲಿನಲ್ಲಿ ತೋಟ ಮಾಡುವುದಕ್ಕೂ ಮರಿಗಳನ್ನು ಸಾಕುವುದಕ್ಕೂ ಅವಕಾಶವಿರಬೇಕು. ಬಯಲಿನ ಇನ್ನೊಂದು ಕಡೆ ಜಾರುಬಂಡೆ, ತೂಗುತೊಲೆ, ತೂಗುಚಕ್ರ, ಉಯ್ಯಾಲೆ ಮುಂತಾದವನ್ನು ಏರ್ಪಡಿಸಿರಬೇಕು. ಸಾಮೂಹಿಕ ಆಟಗಳಿಗಾಗಿ ಜಣಗಂಟೆ, ಗೆಜ್ಜೆ, ಕೈತಮಟೆ ಮುಂತಾದವನ್ನು ಒದಗಿಸಿಕೊಳ್ಳಬೇಕು. ಶಾಲೆಯ ಒಳಗಡೆ ಗೋಡೆಗಳಿಗೆ ಹಿತಕರವಾದ ಬಣ್ಣವಿದ್ದು ಅವನ್ನು ಚೆನ್ನಾಗಿ ಅಲಂಕರಿಸಿರಬೇಕು. ಸುತ್ತಣ ಸನ್ನಿವೇಶ ಮಕ್ಕಳ ಮನಸ್ಸಿನಲ್ಲಿ ನಿಸರ್ಗಪ್ರೇಮವನ್ನೂ ಸೌಂದರ್ಯಾಭಿಮಾನವನ್ನೂ ಮೂಡಿಸುವಂತಿರಬೇಕು. ಇವೆಲ್ಲಕ್ಕಿಂತಲೂ ಮುಖ್ಯವೆಂದರೆ ಅಲ್ಲಿರುವ ಶಿಕ್ಷಕಿ. ಅವರು ಮಕ್ಕಳಲ್ಲಿ ಆಸಕ್ತಿಯುಳ್ಳವರಾಗಿದ್ದು ತಾಯಿಯ ಪ್ರತಿರೂಪದಂತಿರಬೇಕು. ಜೊತೆಗೆ ಅವರು ನರ್ಸರಿ ಶಿಕ್ಷಣದಲ್ಲಿ ತರಬೇತು ಪಡೆದು ಶಾಸ್ತ್ರೀಯ ವಿಧಾನಗಳನ್ನು ಅರಿತವರಾಗಿರಬೇಕು.

ಭಾರತದಲ್ಲಿ ನರ್ಸರಿ ಶಾಲೆಗಳು: ಪ್ರಾಥಮಿಕಪೂರ್ವದ ಶಿಕ್ಷಣದ ಪ್ರಾಮುಖ್ಯವನ್ನು ಪ್ರಪಂಚದ ಎಲ್ಲ ರಾಷ್ಟ್ರಗಳೂ ಒಪ್ಪಿಕೊಂಡಿದ್ದರೂ ಯಾವ ರಾಷ್ಟ್ರವೂ ಅದನ್ನು ತನ್ನ ಹೊಣೆಗಾರಿಕೆಗೆ ಸೇರಿಸಿಕೊಂಡಿಲ್ಲ. ಅದಕ್ಕೆ ಅಗತ್ಯವಾಗುವ ಅಗಾಧ ಪ್ರಮಾಣದ ಹಣದ ಅವಶ್ಯಕತೆಯೇ ಇದಕ್ಕೆ ಕಾರಣ. ಭಾರತದಲ್ಲಿ ಪ್ರಾಥಮಿಕ ಪೂರ್ವದ ಶಿಕ್ಷಣ ಬಹುಮಟ್ಟಿಗೆ ಮಾರ್ಗರೆಟ್ ಮ್ಯಾಕ್ಮಿಲನ್ ಆರಂಭಿಸಿದ ನರ್ಸರಿ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿದೆ. ಅಲ್ಲೊಂದು ಇಲ್ಲೊಂದು ಕಿಂಡರ್ ಗಾರ್ಟನ್ ಮತ್ತು ಮಾಂಟಿಸೋರೀ ಶಾಲೆಗಳಿದ್ದರೂ ಅವುಗಳ ಸಂಖ್ಯೆ ತೀರ ಕಡಿಮೆ. ನರ್ಸರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು, ಕಾರ್ಖಾನೆ ಅಥವಾ ಉದ್ಯಮಗಳು, ಧಾರ್ಮಿಕ ಸಂಸ್ಥೆಗಳೂ, ಸಮಾಜ ಕಲ್ಯಾಣ ಶಾಖೆ ಮುಂತಾದವು ಆರಂಭಿಸಿ ನಡೆಸುತ್ತಿವೆ. ಕರ್ನಾಟಕದಂಥ ಕೆಲವು ರಾಜ್ಯಗಳಲ್ಲಿ ಈ ಹಂತದ ಶಿಕ್ಷಣ ಸರ್ಕಾರದ ನೇರ ಹೊಣೆಗಾರಿಕೆಗೆ ಸೇರಿಸದಿದ್ದರೂ ಇತರರು ಆರಂಭಿಸಿರುವ ಶಾಲೆಗಳಿಗೆ ವಿವಿಧ ರೂಪದಲ್ಲಿ ಪ್ರೋತ್ಸಾಹ ನೀಡುತ್ತಿವೆ. ನರ್ಸರಿ ಶಾಲಾಧ್ಯಾಪಕಿಯರಿಗೆ ತರಬೇತು ನೀಡಲು ಪ್ರಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಅಂಗೀಕೃತ ಶಾಲೆಗಳಿಗೆ ಕಟ್ಟಡದ ಬಾಡಿಗೆ, ಉಪಕರಣಗಳ ಬೆಲೆ, ಅಧ್ಯಾಪಕರ ಸಂಬಳ ಮುಂತಾದ ಬಾಬ್ತುಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಅಲ್ಲದೆ ಶಿಕ್ಷಣ ಶಾಖೆಯ ತಜ್ಞ ತನಿಖಾಧಿಕಾರಿಗಳು ಅಂದಿಗಂದಿಗೆ ಶಾಲೆಗೆ ಭೇಟಿ ಕೊಟ್ಟು ಅಗತ್ಯ ಸಲಹೆ ಸಹಕಾರಗಳನ್ನು ನೀಡುತ್ತಾರೆ. ಕೆಲವು ಶಿಶುವಿಹಾರಗಳು ಕೆಲವು ಪ್ರಾಥಮಿಕ ತರಗತಿಗಳನ್ನೂ ಒಳಗೊಂಡಂತೆ ವ್ಯವಸ್ಥೆಗೊಂಡಿದೆ.

(ನೋಡಿ- ಕಿಂಡರ್‍ಗಾರ್ಟನ್)			
			(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ